ಕೊಲ್ಲಿಕರ್, ರೂಡಾಲ್ಫ್ ಆಲ್ಬರ್ಟ್ ಫಾನ್
1817-1905. ಸ್ವಿಟ್ಸರ್ಲೆಂಡಿನ ಭ್ರೂಣ ಮತ್ತು ಕೋಶರಚನ ವಿಜ್ಞಾನ ಪರಿಣತ. ಜನನ 1817ನೆಯ ಜುಲೈ 6 ರಂದು ಜ್ಯೂರಿಕ್‍ನಲ್ಲಿ. ಲೊವೆನ್ಝೋಕನ್ ಹೆನ್ಲೆ ಮತ್ತು ಮುಲ್ಲರ್ ಅವರಲ್ಲಿ ವಿದ್ಯಾಭ್ಯಾಸ ಮಾಡಿ 1844ರಲ್ಲಿ ಜ್ಯೂರಿಕ್‍ನಲ್ಲಿ ಶರೀರಕ್ರಿಯಾಶಾಸ್ತ್ರ ಮತ್ತು ಅಂಗರಚನಾಶಾಸ್ತ್ರದ ಮುಖ್ಯ ಪ್ರಾಧ್ಯಾಪಕನಾದ. ಈತನ ಮುಂದಾಳುತನದಲ್ಲಿ ಲೇಡಿಗ್, ವಿರ್ಚೌ ಮತ್ತು ಗೆಗನ್‍ಬಾರ್ ಅವರೊಂದಿಗೆ ವರ್ಜಬರ್ಗ್ ಜರ್ಮನಿಯಲ್ಲೇ ಅತ್ಯಂತ ಮುಖ್ಯವಾದ ವೈದ್ಯವಿದ್ಯಾ ಸಂಸ್ಥೆಯಾಯಿತು. ಶಿರೋಪಾದಿಗಳ (ಸೆಫಲಾಪೊಡ) ಬೆಳೆವಣಿಗೆ, ಸ್ನಾಯುವಿನ ರಚನೆ, ಕೆಂಪು ರಕ್ತಕಣಗಳ ಹುಟ್ಟು ಮತ್ತು ಬೆಳೆವಣಿಗೆ ಮತ್ತು ಬೆಳೆವಣಿಗೆಯಲ್ಲಿ ಜೀವಾಂಕುರ ಸಂಸ್ತರದ ಮುಖ್ಯಸ್ಥಾನ-ಇವು ಕೊಲ್ಲಿಕರ್‍ನ ಸಂಶೋಧನೆಗಳಲ್ಲಿ ಮುಖ್ಯವಾದುವು. ವೀರ್ಯಾಣು ಕೋಶಗಳಿಂದಲೇ ಉತ್ಪತ್ತಿಯಾಗುತ್ತದೆ ಎಂಬುದನ್ನು ವಿವರಿಸಿದವರಲ್ಲಿ ಇವನೇ ಮೊದಲಿನವ. ನರಕೋಶಸಿದ್ಧಾಂತವನ್ನು ಪ್ರತಿಪಾದಿಸುವುದಕ್ಕೆ ಮುಖ್ಯ ನಿದರ್ಶನಗಳನ್ನೂ ಒದಗಿಸಿಕೊಟ್ಟ.

ಡಾರ್ವಿನ್ನನ ವಿಕಾಸ ಸಿದ್ಧಾಂತವನ್ನು ಕೊಲ್ಲಿಕರ್ ಕೇವಲ ಮೂಲಸಂಕಲ್ಪ ವಾದ (ಟೆಲಿಯೋಲಾಜಿಕಲ್) ಎಂದು ಭಾವಿಸಿದ. ಪ್ರಾಣಿಗಳು ಕಾಲಕ್ರಮೇಣ ಪರಿವರ್ತನೆಗೊಳ್ಳುತ್ತವೆ ಎನ್ನುವ ವಿಕಾಸ ವಾದದ ತತ್ತ್ವಕ್ಕೆ ವಿರುದ್ಧವಾಗಿ ಅವು ತ್ವರಿತವಾದ ಬದಲಾವಣೆಯನ್ನು ಹೊಂದುತ್ತವೆ ಎಂದು ಸೂಚಿಸಿದ. 1852ರಲ್ಲಿ ಭ್ರೂಣ ಶಾಸ್ತ್ರದ ಬಗ್ಗೆಯೂ 1861ರಲ್ಲಿ ಕೋಶರಚನಾಶಾಸ್ತ್ರದ ಬಗ್ಗೆಯೂ ಎರಡು ಉತ್ಕøಷ್ಟ ಗ್ರಂಥಗಳನ್ನು ಪ್ರಕಟಿಸಿದ. ಈತ ನಿಧನ ಹೊಂದಿದ್ದು ನವೆಂಬರ್ 2, 1905ರಲ್ಲಿ.         								 (ಎಚ್.ಆರ್.ಡಿ.ಎಚ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ